ಪರಾತತ್ತ್ವ
ಭೌತಶಾಸ್ತ್ರಕ್ಕಿಂತ ಮೇಲಿನ ವಸ್ತುತತ್ತ್ವವೆಂಬುದು ಈ ಶಬ್ಧದ ಯೌಗಿತಾರ್ಥ. ಅರಿಸ್ಟಾಟಲ್ ತನ್ನ ಚಿಂತನೆಯಲ್ಲಿ ಎಲ್ಲ ಅಸ್ತಿತ್ವ. ಜ್ಞಾನ ಹಾಗೂ ವಿವರಣೆಗಳಿಗೆ ಮೂಲಭೂತವಾದ ಒಂದು ಸಂಪೂರ್ಣ ಹಾಗೂ ಸಮಗ್ರ ವಿವೇಚನೆಗೆ ಮೊದಲು ಈ ಹೆಸರನ್ನಿತ್ತ. ಸತ್ ಎಂಬ ಮೂಲವಸ್ತುವನ್ನು ಯಥವಾತ್ತಾಗಿ ವಿವೇಚಿಸಬಲ್ಲ ಶಾಸ್ತ್ರವೊಂದುಂಟು. ಬೌದ್ಧಿಕವಾದ ಸಾಮಾನ್ಯಗಳು ದ್ರವ್ಯವೆನಿಸಬಹುದೆ, ಇಲ್ಲವೆ-ಎಂಬ ಮುಖ್ಯ ಪ್ರಶ್ನೆಗಳ ವಿವೇಚನೆಯನ್ನು ಆತನ ಗ್ರಂಥದಲ್ಲಿ ಕಾಣುತ್ತೇವೆ. ಮೂಲತತ್ತ್ವಗಳ ಸಮಗ್ರವಿಚಾರವೆಂಬುದು ಪರಾತತ್ತ್ವದ ಲಕ್ಷಣವೆನ್ನಬಹುದು. ಇದರ ಅಂಗವೇ ಸತ್ಯ ವಿವೇಚನೆಯಾದ ಪ್ರಮಾಣಶಾಸ್ತ್ರ.

	ಸ್ವಪ್ನ-ಜಾಗ್ರತ್ ಅವಸ್ಥೆಗಳಲ್ಲಿ, ಸತ್ಯ-ಅಸತ್ಯಗಳಲ್ಲಿ, ಸಮ್ಯಕ್‍ಜ್ಞಾನ-ಮಿಥ್ಯಾಜ್ಞಾನಗಳಲ್ಲಿ ಅಂತರವನ್ನು ನಾವು ಹೇಳುವುದಾದರೆ ಅದು ಪರಾತತ್ತ್ವದ ಅಂತರವೇ ಸರಿ ವಿಜ್ಞಾನಿಯೊಬ್ಬ ಮೇಜೊಂದನ್ನು ಅನೇಕ ವಿದ್ಯುತ್-ಪರಸ್ಪಂದಗಳ ಸಂಘಾತವೆಂದೂ ಬೆಳಕು ಪ್ರತಿಮುಖ ವಿದ್ಯುದಾಕರ್ಷಕ ಸ್ಪಂದವೆಂದೂ ಹೇಳುವಾಗ ಅವನು ವಸ್ತುಗಳ ತೋರಿಕೆಯ ಹಿಂದೆ ಅಡಗಿರುವ ಮೂಲ ಸದ್ರೂಪವನ್ನು ಕುರಿತು ವಿವೇಚಿಸುವುದರಿಂದ ಅದೂ ಒಂದು ರೀತಿಯ ಪರಾತತ್ತ್ವವನ್ನೇ ಒಳಗೊಂಡಿದೆಯೆನ್ನಬಹುದು.

	ಆದರೆ ತತ್ತ್ವಶಾಸ್ತ್ರದ ಪರಾತತ್ತ್ವ ಬೇರೆಯೇ ಆಗಿದೆ. ಡೇಕಾರ್ಟನ ಮೊದಲ ತತ್ತ್ವಸೂತ್ರವಿದು : ನಾನು ಆಲೋಚಿಸುತ್ತೇನೆ ಆದ್ದರಿಂದ ನಾನು ಇದ್ದೇನೆ. ಇದರಿಂದ ನಾನು ಅಥವಾ ಆತ್ಮ ಸಿದ್ಧವಾಗುತ್ತದೆ. ಮುಂದೆ ಪರಿಪೂರ್ಣ ಸದ್ರೂಪನ ಕಲ್ಪನೆ ನನಗಿದೆ, ಅಪರಿಪೂರ್ಣ ಸದ್ರೂಪನಾದ ನನ್ನಲ್ಲಿ ಅದು ಬರಬೇಕಾದರೆ ಪರಿಪೂರ್ಣ ಸದ್ರೂಪನಿಂದಲೇ ಬರಬೇಕು. ಆದ್ದರಿಂದ ಅಂಥ ದೇವರು ಇದ್ದಾನೆ. ಆ ಸದ್ರೂಪ ಭ್ರಾಂತಿರಹಿತನೂ ಆಗಿರಬೇಕು, ನಾನು ಭ್ರಾಂತಿಸಹಿತನಿದ್ದರೂ-ಎಂಬುದು ಮುಂದಿನ ತರ್ಕಸರಣೆ ಹೀಗೆ ಮನಸ್ಸು ಮತ್ತು ವಸ್ತುಗಳೆರಡಕ್ಕೂ ನಿಯಾಮಕನಾದವನೇ ದೇವರು ಎನ್ನುವುದು ಅದರ ಮುಂದಿನ ಹೆಜ್ಜೆ. ಹೀಗೆಯೇ ಮತ್ತೂ ಮುಂದಿನ ಹೆಜ್ಜೆಯನ್ನಿಟ್ಟವನು ಸ್ಪಿನೋಜû ಅದ್ವಯ ದೇವರ ಅನಂತ ಶಕ್ತಿಗಳಲ್ಲಿ ಮನಸ್ಸು ಮತ್ತು ವಸ್ತುಗಳು ಕೇವಲ ಎರಡು ಆವಿಷ್ಕಾರಗಳಷ್ಟೆ. ಲೈಪ್‍ನಿಟ್ಸ್ ಇವೆರಡರ ಬದಲು ಚೈತನ್ಯ ಕಣವೆನಿಸುವ ಅನಂತ ಮೂಲದ್ರವ್ಯಗಳನ್ನು ಒಪ್ಪಿ, ಅವಕ್ಕೆಲ್ಲ ಮನೋ ವ್ಯಪಾರವೂ ಪ್ರಕಟಾಪ್ರಕಟವಾಗಿ ಇರುತ್ತದೆ ಎನ್ನುತ್ತಾನೆ ಇವನು ವಿಜ್ಞಾನವಾದಿಯಾದಂತೆ ಬಾಕ್ರ್ಲೆಯೂ ಮನಸ್ಸಿನಲ್ಲಿ ಮೂಡುವ ಕಲ್ಪನೆಗಳೇ ಮೂಲ ಸತ್ಯವೆಂದು ಸಿದ್ಧಂತಿಸುತ್ತಾನೆ. ಹ್ಯೂಮ್ ದೇವರು ಮತ್ತು ಆತ್ಮಗಳನ್ನು ಕೈಬಿಟ್ಟು ಜಗತ್ತನ್ನು ಇಂದ್ರಿಯ ವಿಷಯಾನುಭವವೆಂದೇ ವಿವರಿಸುತ್ತಾನೆ. ಕಾಂಟ್ ಮತ್ತು ಹೇಗಲ್ ಬೇರೆ ಬೇರೆ ಚಿಂತನೆಗಳನ್ನು ಪುರಸ್ಕರಿಸಿ ಈ ತತ್ತ್ವವಿವೇಚನೆಯನ್ನು ಬೆಳೆಸಿದ್ದಾರೆ. ಈಚೆಗೆ ಬರ್ಟ್‍ರಾಂಡ್ ರಸೆಲ್ ಮತ್ತೊಂದು ದಿಕ್ಕಿನಿಂದ ಕಾಲ, ದೇಶ, ಕಾರಣತೆಗಳನ್ನು ಆಳವಾಗಿ ವಿವೇಚಿಸಿದ್ದಾನೆ. ಹೇಗೆಯೇ ಇರಲಿ, ಪರಾತತ್ತ್ವದ ಪ್ರಭಾವ ಮನಶ್ಯಾಸ್ತ್ರ, ತರ್ಕಶಾಸ್ತ್ರ, ಗಣಿತಶಾಸ್ತ್ರ, ಭೌತಶಾಸ್ತ್ರ, ಸೌಂದರ್ಯಶಾಸ್ತ್ರ, ನೀತಿಶಾಸ್ತ್ರ, ಧರ್ಮಶಾಸ್ತ್ರ ಮುಂತಾದ ತತ್ತ್ವಶಾಸ್ತ್ರದ ಅನೇಕ ವಿಭಾಗಗಳ ಮೇಲೂ ಆಳವಾಗಿದೆ. ಭಾರತದಲ್ಲಿ ಬೌದ್ಧದರ್ಶನ, ವೇದಾಂತಶಾಸ್ತ್ರ ಮತ್ತು ನ್ಯಾಯ ವೈಶೇಷಿಕಗಳು ಈ ಮೂಲ ಸತ್-ಅಸತ್ ಸ್ವರೂಪ ವಿವೇಚನೆಗೆ ತಮ್ಮ ಕಾಣಿಕೆಯನ್ನಿತ್ತಿವೆ.					(ಕೆ.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ